
ಚಂದ್ರಚೂಡ ಶಿವಶಂಕರ ಪಾರ್ವತಿರಮಣಾ ನಿನಗೆ ನಮೋ ನಮೋ
ರಾಗ: ಧನ್ಯಾಸಿ ತಾಳ: ಆದಿ
ಚಂದ್ರಚೂಡ ಶಿವಶಂಕರ ಪಾರ್ವತಿರಮಣಾ ನಿನಗೆ ನಮೋ ನಮೋ || ಪ ||
ಸುಂದರ ಮೃಗಧರ ಪಿನಾಕಧನುಧರ ಗಂಗಾಶಿರ ಗಜಚರ್ಮಾಂಬರಧರ || ಅ.ಪ ||
ನಂದಿವಾಹನಾನಂದದಿಂದ ಮೂರ್ಜಗದಿ ಮೆರೆವವ ನೀನೆ
ಅಂದು ಅಮೃತಘಟದಿಂದುದಯಿಸಿದ ವಿಷತಂದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀರಾಮನ ಪಾದವ ಚೆಂದದಿ ಪೊಗಳುವ ನೀನೆ || ೧ ||
ಬಾಲ ಮಾರ್ಕಂಡನ ಕಾಲನು ಎಳೆವಾಗ ಪಾಲಿಸಿದಾತನು ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ಗಿಗಂಬರ ನೀನೆ
ಕಾಲಕೂಟ ವಿಷವ ಮೆದ್ದ ಶೂಲಪಾಣಿಯು ನೀನೆ
ಜಾಲಮಾಡಿದ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ || ೨ ||
ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರದಿ ವಾಸನು ನೀನೆ
ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩ ||
Advertisements