ಆವ ರೋಗವೊ ಎನಗೆ ದೇವಧನ್ವಂತ್ರಿ
ರಾಗ – ಕಾನಡ ತಾಳ – ಖಂಡಚಾಪು
ಆವ ರೋಗವೊ ಎನಗೆ ದೇವಧನ್ವಂತ್ರಿ || ಪ ||
ಸಾವಧನದಿ ಕೈಯ ಪಿಡಿದು ನೀ ನೋಡಯ್ಯ || ಅ.ಪ ||
ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆಗೆ
ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ || ೧ ||
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು
ಗುರುಹಿರಿಯರಂಘ್ರಿಗೆ ಶಿರ ಬಾಗದು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ || ೨ ||
ಅನಾಥಬಂಧು ಗೋಪಾಲವಿಠಲರೇಯ
ಎನ್ನ ಭಾಗದ ವೈದ್ಯ ನೀನೆಯಾದೆ
ಅನಾದಿ ಕಾಲದ ಭವರೋಗ ಕಳೆಯಯ್ಯ
ನಾನೆಂದಿಗುಮರೆಯೆ ನೀ ಮಾಡಿದುಪಕಾರ || ೩ ||
Advertisements