ಹಿಗ್ಗುವಿ ಯಾಕೋ ಈ ದೇಹಕ್ಕೆ (ಶ್ರೀ ಪುರಂದರದಾಸರು)

ರಾಗ – ಭೈರವಿ             ತಾಳ – ಆಟ

ಹಿಗ್ಗುವಿ ಯಾಕೋ ಈ ದೇಹಕ್ಕೆ ಹಿಗ್ಗುವಿ ಯಾಕೊ || ಪ ||
ಹಿಗ್ಗುವ ತಗ್ಗುವ ಮುಗ್ಗುವ ನೆಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ || ಅ.ಪ ||

ಸತಿ ಪುರುಷರು ಕೂಡಿ ರತಿ ಕ್ರೀಡೆಗಳನಾಡಿ
ಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ || ೧ ||

ಆಗ-ಭೋಗಗಳನ್ನು ಆಗುಮಾಡುತಲಿಪ್ಪ
ರೋಗಬಂದರೆ ಬಿದ್ದು ಹೋಗುವ ದೇಹಕ್ಕೆ || ೨ ||

ಪರರ ಸೇವೆಯ ಮಾಡಿ ನರಕಭಾಜನನಾಗಿ
ಮರಳಿಮರಳಿ ಬಿದ್ದು ಹೋಗುವ ದೇಹಕ್ಕೆ || ೩ ||

ಸೋರುವದೊಂಬತ್ತು ಬಾಗಿಲದಿಂದಲಿ ಮಲ
ನೀರಿಲ್ಲದಿದ್ದರೆ ನಾರುವ ದೇಹಕ್ಕೆ || ೪ ||

ಪುರಂದರ ವಿಟ್ಠಲನ ಚರಣಕಮಲಕ್ಕೆ
ಎರಗದೆ ಇರುತಿಹ ಗರುವದ ದೇಹಕ್ಕೆ || ೫ ||

ನಿಮ್ಮ ಟಿಪ್ಪಣಿ ಬರೆಯಿರಿ