ಹಸ್ತ ಮಹಿಮಾ ಸ್ತುತಿ ಸುಳಾದಿ (ಶ್ರೀ ವಿಜಯದಾಸರು)

ಧ್ರುವತಾಳ –

ಕಡಗ ಕಂಕಣದಿಂದ ಶೋಭಿತವಾದ ಹಸ್ತಾ
ಪೊಡವಿಪತಿ ರಘುನಾಥಗೆ ಎರಗಿ ಮುಗಿದ ಹಸ್ತಾ
ಒಡನೆ ಕುರಹುಗೊಂಡು ಸೀತೆಗಿತ್ತ ಹಸ್ತಾ
ಗಿಡಗಳು ಮುರಿದು ತರದಂಥದೀ ಹಸ್ತಾ
ಘುಡಿಘುಡಿಸುತ ಅಕ್ಷನ ಸದೆಬಡೆದ ಹಸ್ತಾ
ಜಡರಾವಣ ಎದೆಯಲ್ಲಿ ಗುದ್ದಿದ ಹಸ್ತಾ
ತಡಿಯದೆ ಚೂಡಾಮಣಿಯ ಒಡೆಯಾಗಿತ್ತ ಹಸ್ತಾ
ಕಡು ಪರಾಕ್ರಮದ ಹಸ್ತಾ
ಕಡಲಾ ಬಂಧಿಸಲು ಗಿರಿಗಳ ತಂದ ಹಸ್ತಾ
ಬಿಡದೆ ಪೂಜಿಪರಿಗೆ ಅಭಯಕೊಡುವ ಹಸ್ತಾ
ಸಡಗರದ ದೈವ ಸಿರಿ ವಿಜಯ ವಿಠ್ಠಲರಾಯನ
ಅಡಿಗಳಲ್ಲಿ ಅನುಗಾಲ ಇಟ್ಟ ಹಸ್ತಾ || ೧ ||

ಮಟ್ಟತಾಳ –

ಗದೆಯಿಂದ ಅರಿಗಳ ಸದೆ ಬಡಿದ ಹಸ್ತಾ
ಮುದದಿಂದಲಿ ಅದ್ರಿವೊದಗಿ ತಂದ ಹಸ್ತಾ
ಕದನದೊಳಗೆ ಮಾಗಧನ ಸೀಳಿದ ಹಸ್ತಾ
ಮದನೃಪನನುಜನ ಉರವ ಬಗೆದ ಹಸ್ತಾ
ಸುದತಿಯ ತುರುಬು ತಿದ್ದಿದ ಕರುಣ ಹಸ್ತಾ
ಪದೋಪದಿಗೆ ನಮ್ಮ ವಿಜಯ ವಿಠ್ಠಲನ್ನ
ಸದಮಲ ಭಕ್ತಾ ಎನಗೆ ಪೊಳೆವ ಹಸ್ತಾ || ೨ ||

ತ್ರಿವಿಡಿತಾಳ –

ರಣದೊಳು ಲಕ್ಷ್ಮಣನ ಎತ್ತಿತಂದ ಹಸ್ತಾ
ಕ್ಷಣದೊಳು ದ್ರೋಣನ ರಥ ಬಗೆದ ಹಸ್ತಾ
ಸೆಣೆಸುವರಿಗೆ ಎದೆ ಶೂಲವಾಗಿಹ ಹಸ್ತಾ
ವಿನಯದಿಂದಲಿ ಹರಿವಾಣ ಒಯಿದ ಹಸ್ತಾ
ಮಣಿಗಣದಿಂದ ರಾಮನ ಎಣೆಸುವ ಹಸ್ತಾ
ತೃಣಮಾಡಿ ಬಕನ ಸಂಹರಿಸಿದ ಮಹಾ ಹಸ್ತಾ
ಅನಿಮಿಷರಿಗೆ ತುತ್ತುಮಾಡಿ ನೀಡಿದ ಹಸ್ತಾ
ವನಿತೆಗೆ ಸೌಗಂಧಿ ಕುಸುಮ ತಂದ ಹಸ್ತಾ
ವನದೊಳು ಅಸುರೆಯ ಬಿಗಿದಪ್ಪಿದ ಹಸ್ತಾ
ಘನದಂಡ ಕಾಷ್ಟವ ಧರಿಸಿ ಮೆರೆದ ಹಸ್ತಾ
ಅನಿಮಿತ್ತ ಬಂಧು ಶ್ರೀವಿಜಯವಿಠ್ಠಲರೇಯನ
ಮನದೊಳಿಟ್ಟು ಅರ್ಚನೆ ಮಾಡುವ ಹಸ್ತಾ || ೩ ||

ಅಟ್ಟತಾಳ –

ವಾರಿಜಜಾಂಡವ ಸಾಕುವುದೀ ಹಸ್ತಾ
ಭಾರತೀದೇವಿಯ ಮನಸಿಗೊಪ್ಪುವ ಹಸ್ತಾ
ನೂರಾರು ಖಂಡಗ ಪಾಕ ಗೈಸಿದ ಹಸ್ತಾ
ವಾರಣದಿಂದ ಮಸ್ತಕ ಪಿಡಿದ ಹಸ್ತಾ
ಮಾರಾರಿಗೆ ಉಪದೇಶ ಮಾಡಿದ ಹಸ್ತಾ
ವಾರಣಗಳ ಗಗನಕ್ಕೆ ಇಟ್ಟ ಹಸ್ತಾ
ಚಾರು ಚರಿತ ನಮ್ಮ ವಿಜಯ ವಿಠ್ಠಲರೇಯನ
ಹಾರೈಸಿ ಹರುಷರದಿ ಪೂಜಿಪ ಈ ಹಸ್ತಾ || ೪ ||

ಆದಿತಾಳ –

ವಿಷ ಉದ್ಭವಿಸಲು ಒರಸಿ ಕಳೆದ ಹಸ್ತಾ
ಶಿಶುವಾಗಿ ಹುರಳಿ ಗುಗ್ಗರಿ ಸವಿದ ಹಸ್ತಾ
ಬಿಸಿಜ ಸಖಗೆ ತುಡಿಕಿ ಕ್ರಮಗೆಡಿಸಿದ ಹಸ್ತಾ
ನಿಷಿಕ ತಿಂತ್ರಿಣಿ ಬೀಜದಿ ಸಾಲತಿದ್ದಿದ ಹಸ್ತಾ
ದಶ ಚತುರ್ಲೋಕವ ಒಳಗಡಗಿಸುವ ಹಸ್ತಾ
ಹಸಿದು ತುತಿಸಲು ಅಮೃತವಗರೆದ ಹಸ್ತಾ
ದಶಶಿರನ ಮದಕಾಯ ಶರಗು ಎಳೆದ ಹಸ್ತಾ
ಅಸುರ ವೈರಾವಣನ ಕೊಂದು ಬಿಸುಟ ಹಸ್ತಾ
ವಸುಧೆಯ ಸುರರಿಗೆ ಮುದ್ರೆ ಒತ್ತಿದ ಹಸ್ತಾ
ಶಶಿವರ್ಣದಂತೆ ನಖದಿಂದೊಪ್ಪುವ ಹಸ್ತಾ
ವಸುಧೀಶ ವಿಜಯ ವಿಠ್ಠಲ ರಾಮಕೃಷ್ಣವ್ಯಾಸರ
ಬಿಸಜ ಪಾದವ ಬಿಡದೆ ಭಜಿಪ ಮಂಗಳ ಹಸ್ತಾ || ೫ ||

ಜತೆ –

ಮೂರಾವತಾರದಲ್ಲಿ ಕಾರ್ಯ ಮಾಡಿದ ಹಸ್ತಾ
ಧೀರ ಶ್ರೀವಿಜಯ ವಿಠ್ಠಲಗೆರಗಿದ ಹಸ್ತಾ || ೬ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s