ರಾಗ: ಪಂತುವರಾಳಿ ತಾಳ: ಆದಿ
ಉದರವೈರಾಗ್ಯವಿದು ನಮ್ಮ
ಪದುಮನಾಭನಲ್ಲಿ ಲೇಶಭಕುತಿ ಇಲ್ಲ || ಪ ||
ಉದಯ ಕಾಲದಲೆದ್ದು ಗದಗದ ನಡುಗುತ
ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯದೋರುವುದು || ೧ ||
ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆಯ ಮುಸುಕನು ಮೋರೆಗೆ ಹಾಕಿ
ಪರಸತಿಯರ ರೂಪ ಮನದಲಿ ಗುಣಿಸುತ
ಪರಮ ವೈರಾಗ್ಯಶಾಲಿಯೆನಿಸುವುದು || ೨ ||
ಕಂಚುಗಾರನಾ ಬಿಡಾರದಿಂದಲಿ
ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ
ಮಿಂಚಬೇಕೆಂದು ಬಹುಜ್ಯೋತಿಗಳನೆ ಹಚ್ಚಿ
ವಂಚಕತನದಲಿ ಪೂಜೆಯ ಮಾಳ್ಪುದು || ೩ ||
ಬೂಟಕತನದಿ ಬಹಳ ಭಕುತಿ ಮಾಡಿ
ಸಾಟಿಯಿಲ್ಲವು ಎನಗೆಂದೆನಿಸಿ
ನಾಟಕಸ್ತ್ರೀಯಂತೆ ಬಯಲಡಂಬವ ತೋರಿ
ಊಟಕೆ ಸಾಧನ ಮಾಡಿಕೊಂಬುದಿದು || ೪ ||
ನಾನು ಎಂಬುದು ಬಿಟ್ಟು ಜ್ಞಾನಿಗಳೊಡಗೂಡಿ
ಏನಾದುದು ಹರಿಪ್ರೇರಣೆಯೆಂದು
ಶ್ರೀನಿಧಿ ಪುರಂದರ ವಿಠಲರಾಯನನು
ಕಾಣದೆ ಮಾಡಿದ ಕಾರ್ಯಗಳೆಲ್ಲ || ೫ ||



ಎಲ್ಲ ಸ್ತೋತ್ರಗಳ PDF ಆವೃತ್ತಿಯನ್ನು ಸ್ತೋತ್ರಗಳ ಕೊನೆಯಲ್ಲಿ ಸೇರಿಸಲಾಗಿದೆ.
