ರಾಗ: ಕಾಂಬೋದಿ ತಾಳ: ಅಟ್ಟ
ಋಣವೆಂಬ ಪಾತಕವು ಬಹು ಬಾಧೆ ಪಡಿಸುತಿದೆ || ಪ ||
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೊ || ಅ.ಪ ||
ಒಡಲಿನಾಸೆಗೆ ಪರರ ಒಡವೆಗಳನೆ ತಂತು
ಬಿಡದೆ ವೆಚ್ಚವ ಮಾಡಿ ತೋಷಪಡುವೆ
ಕೊಡುವ ವೇಳೆಗವರ ಕೆಡುನುಡಿಗಳನು ನುಡಿವೆ
ಕಡು ಮಹಾಪಾತಕವ ಪರಿಹರಿಸೊ ಹರಿಯೆ || ೧ ||
ಕೊಟ್ಟವರು ಬಂದೆನ್ನ ನಿಷ್ಠೂರಗಳನಾಡಿ
ಕೆಟ್ಟ ಬೈಗಳ ಬೈದು ಮನದಣಿಯಲು
ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ
ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೊ || ೨ ||
ಅಳಿದೊಡೆಯನ ಮಾತು ಕೇಳಿ ನಡೆಯಲಿಬಹುದು
ಊಳಿಗವ ಮಾಡಿ ಮನ ದಣಿಯಬಹುದು
ಕಾಳಗವ ಪೊಕ್ಕು ಕಡಿದಾಡಿ ಜಯಿಸಲಿಬಹುದು
ಪೇಳಲವಲ್ಲ ಋಣದವಗೊಂದು ಸೊಲ್ಲ || ೩ ||
ಹರಿವ ಹಾವನು ತೆಗೆದು ಶಿರಕೆ ಸುತ್ತಲುಬಹುದು
ಉರಿವ ಉರಿಯೊಳು ಪೊಕ್ಕು ಕುಣಿಯಬಹುದು
ಮುರಿವ ಮಾಳಿಗೆಗೆ ಕೈಯೊಡ್ಡಿ ನಿಲ್ಲಿಸಬಹುದು
ಧರೆಯೊಳಗೆ ಋಣದವನ ಜಯಿಸಲಳವಲ್ಲ || ೪ ||
ಹೆತ್ತ ಸೂತಕ ಹತ್ತುದಿನ ಪರಿಯಂತ
ಮೃತ್ಯು ಸೂತಕವು ಹನ್ನೊಂದು ದಿವಸ
ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ
ಎತ್ತ ಪೋದರು ಬಿಡದೆ ಬೆನ್ನಟ್ಟಬಹುದು || ೫ ||
ಅವನ ಒಡೆವೆಗಳಿಂದ ದಾನ ಧರ್ಮವ ಮಾಡೆ
ಅವನಿಗಲ್ಲದೆ ಪುಣ್ಯ ಇವನಿಗುಂಟೆ?
ಅವನ ದ್ರವ್ಯಗಳಿಂದ ತೀರ್ಥಯಾತ್ರೆಯ ಮಾಡೆ
ಇವನ ಜೀವನವು ಬಾಡಿಗೆ ಎತ್ತಿನಂತೆ || ೬ ||
ಬಂಧು ಜನಗಳ ಮುಂದೆ ಬಹುಮಾನವು ಹೋಗಿ
ಅಂದವಳಿದೆನು ನಾನು ನೊಂದು ಋಣದಿ
ಇಂದಿರೆಯ ಅರಸ ಶ್ರೀಪುರಂದರ ವಿಠಲನೆ
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ || ೭ ||



ಎಲ್ಲ ಸ್ತೋತ್ರಗಳ PDF ಆವೃತ್ತಿಯನ್ನು ಸ್ತೋತ್ರಗಳ ಕೊನೆಯಲ್ಲಿ ಸೇರಿಸಲಾಗಿದೆ.
